ಮೆಕ್ಕೆಜೋಳ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
ಮೆಕ್ಕೆ ಜೋಳ (ಮುಸುಕಿನ ಜೋಳ/ಗೋಂಜೋಳ/ಗೋಂಜಾಳ) ಭಾರತದ ಒಂದು ಅತಿ ಮುಖ್ಯವಾದ ಆಹಾರ ಬೆಳೆಯಾಗಿದ್ದು ಭತ್ತ ಮತ್ತು ಗೋಧಿಯ ನಂತರದ ಸ್ಥಾನದಲ್ಲಿದೆ. ಇದನ್ನು ಮುಖ್ಯವಾಗಿ ಮುಂಗಾರು ಬೆಳೆಯಾಗಿ ಭಾರತದಲ್ಲಿ ಬೆಳೆಯಲಾಗುತ್ತದೆ. ಶೇಕಡಾ 85 ನಷ್ಟು ಬೆಳೆಯನ್ನು ಮುಂಗಾರು ಬೆಳೆಯಾಗಿ ಮತ್ತು ಉಳಿದ 15% ಅನ್ನು ಹಿಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ. ವಿಶ್ವದ ಒಟ್ಟು ಮೆಕ್ಕೆ ಜೋಳ ವಿಸ್ತೀರ್ಣದಲ್ಲಿ ಭಾರತ 4 ನೇ ಸ್ಥಾನದಲ್ಲಿ ಮತ್ತು ಉತ್ಪಾದನೆಯಲ್ಲಿ ಮಾತ್ರ 7 ನೇ ಸ್ಥಾನದಲ್ಲಿದೆ. ವಿಶ್ವದ ಮೆಕ್ಕೆ ಜೋಳ ಉತ್ಪಾದಕತೆಗೆ ಹೋಲಿಸಿದರೆ ಭಾರತದ ಉತ್ಪಾದಕತೆ ಕೇವಲ ಅರ್ಧದಷ್ಟು ಮಾತ್ರ. ಇದು ನಾವು ವಿಚಾರ ಮಾಡಬೇಕಾದ ವಿಷಯ. ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆಹಾರ ಭದ್ರತೆಯನ್ನು ಒದಗಿಸಲು ನಮ್ಮ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ.
ಮೆಕ್ಕೆ ಜೋಳ ಹೆಚ್ಚು ಪೋಷಕಾಂಶಗಳನ್ನು ಇಷ್ಟಪಡುವ ಬೆಳೆಯಾಗಿದ್ದು, ಬೇರೆ ಬೆಳೆಗಳಿಗೆ ಹೋಲಿಸಿದರೆ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಆದ್ದರಿಂದ ಮೆಕ್ಕೆ ಜೋಳ ಬೆಳೆ ಮಾಡುವ ಮೊದಲು ಮಣ್ಣು ಪರೀಕ್ಷೆಯನ್ನು ಮಾಡಿಸುವುದು ಮುಖ್ಯವಾಗುತ್ತದೆ. ಮೊದಲೆನೆಯದಾಗಿ ಮಣ್ಣಿನ ರಸಸಾರದಲ್ಲಿ ವ್ಯತ್ಯಾಸವಿದ್ದಲ್ಲಿ ಅದನ್ನು ಸರಿ ಪಡಿಸಬೇಕು. ಹುಳಿ/ಆತ್ಮೀಯ ಮಣ್ಣಾಗಿದ್ದಲ್ಲಿ ರಸಸಾರಕ್ಕೆ ಅನುಗುಣವಾಗಿ ಸುಣ್ಣ ಅಥವಾ ಡೋಲಮೈಟ್ ಅನ್ನು, ಸವಳು/ಕ್ಷಾರೀಯ ಮಣ್ಣಾಗಿದ್ದಲ್ಲಿ ರಸಸಾರಕ್ಕೆ ಅನುಗುಣವಾಗಿ ಜಿಪ್ಸಮ್ ಅನ್ನು ಕೊಟ್ಟು ತಟಸ್ಥಗೊಳಿಸಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರಗಳನ್ನು ಕೊಟ್ಟು ಬೆಳೆ ಮಾಡಿದಾಗ ರೈತರು ಹೆಚ್ಚಿನ ಆದಾಯವನ್ನು ಪಡೆಯಬಹುದು.
ಸಮಗ್ರ ಪೋಷಕಾಂಶಗಳ ನಿರ್ವಹಣೆ: ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು, ಪೋಷಕಾಂಶಗಳನ್ನು ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಒದಗಿಸಲು, ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಲು, ಸಾಧ್ಯವಿರುವ ಎಲ್ಲಾ ಪೋಷಕಾಂಶಗಳ ಮೂಲಗಳಾದ ಸಾವಯವ, ಜೈವಿಕ ಮತ್ತು ರಸಾಯನಿಕ ಗೊಬ್ಬರಗಳನ್ನು ವಿವೇಕ ಚಿತ್ತದಿಂದ ಸರಿ ಪ್ರಮಾಣದಲ್ಲಿ ಉಪಯೋಗಿಸಿಕೊಂಡು ಬೆಳೆ ಮಾಡುವುದಕ್ಕೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಎಂದು ಕರೆಯಲಾಗುವುದು. ಕೊಟ್ಟಿಗೆ ಗೊಬ್ಬರ ಸಿಗುವುದು ಈಗ ಕಡಿಮೆಯಾಗಿದ್ದು ರೈತರು ಸಾವಯವ ಗೊಬ್ಬರದ ಬಳಕೆಯನ್ನು ಕಡೆಗಣಿಸಿದ್ದಾರೆ ಮತ್ತು ಹೆಚ್ಚು ರಸಾಯನಿಕ ಗೊಬ್ಬರಗಳ ಮೊರೆ ಹೋಗಿರುವುದರಿಂದ ಮಣ್ಣಿನ, ಬೆಳೆಯ ಮತ್ತು ಮಣ್ಣಿನಲ್ಲಿ ವಾಸಿಸುವ ಜೀವಿಗಳ ನಡುವಿನ ಒಡನಾಟಕ್ಕೆ ಪೆಟ್ಟು ಬಿದ್ದಿದೆ. ಕೊಟ್ಟಿಗೆ ಗೊಬ್ಬರವಿಲ್ಲವಾದಲ್ಲಿ ಅದಕ್ಕೆ ಪರ್ಯಾಯವಾಗಿ ರೈತರು ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಡಯಾಂಚಾ, ಅಥವಾ ಇನ್ನಿತರ ದ್ವಿದಳ ಧಾನ್ಯಗಳನ್ನು ಬೆಳೆದು ಹೂ ಬಿಡುವ ಸಮಯದಲ್ಲಿ ಮಣ್ಣಿಗೆ ಬೆರೆಸಿದಾಗ, ಮಣ್ಣಿನ ಸಾವಯವ ಅಂಶವನ್ನು ಹೆಚ್ಚಿಸಬಹುದು. ಬೆಳೆ ತ್ಯಾಜ್ಯಗಳನ್ನು ಹೊಲಗಳಲ್ಲಿ ಸುಡದೆ ಅದನ್ನು ಎರೆಹುಳು ಗೊಬ್ಬರವಾಗಿ ಪರಿವರ್ತಿಸಿ ಉಪಯೋಗಿಸುವುದರಿಂದ ಸಹ ಸಾವಯವ ಅಂಶವನ್ನು ಹೆಚ್ಚಿಸಬಹುದು.
ಸಾಮಾನ್ಯವಾಗಿ ರೈತರು ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿಲ್ಲ. ಇದಕ್ಕೆ ಕಾರಣ ರೈತರಿಗೆ ಅವುಗಳ ಬಗ್ಗೆ ಅರಿವು/ಮಾಹಿತಿ ಇಲ್ಲದಿರುವುದು ಒಂದು ಕಾರಣವಾಗಿದೆ. ಜೈವಿಕ ಗೊಬ್ಬರಗಳಾದ ಅಜೋಸ್ಪಿರಿಲ್ಲಮ್ ಮತ್ತು ರಂಜಕ ಕರಗಿಸುವ ಬ್ಯಾಕ್ಟಿರಿಯಾ (ಫಾಸ್ಪೇಟ್ ಸಾಲ್ಯುಬಿಲೈಸಿಂಗ್ ಬಾಕ್ಷೀರಿಯಾ) ಗಳನ್ನು ಬಿತ್ತನೆಯ ಸಮಯದಲ್ಲಿ ಉಪಯೋಗಿಸಿದಲ್ಲಿ ನಾವು ರಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಕಡಿತಗೊಳಿಸಬಹುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸಬಹುದಾಗಿದೆ.
ರಸಾಯನಿಕ ಗೊಬ್ಬರಗಳನ್ನು ನಾವು ಯಾವಾಗಲೂ ಕೊನೆಯ ಆಯ್ಕೆಯಾಗಿ ಉಪಯೋಗಿಸಬೇಕು, ಆದರೆ ರೈತರು ಹೆಚ್ಚು ರಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ.
ಮೆಕ್ಕೆಜೋಳ ಬೆಳೆಗೆ ಸುಮಾರು 10 ರಿಂದ 15 ಟನ್ನಷ್ಟು ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ಕೊನೆ ಉಳುಮೆ ಮಾಡುವ ಸಮಯದಲ್ಲಿ ಕೊಡಬೇಕಾಗುತ್ತದೆ. ಅಜೋಸ್ಪಿರಿಲ್ಲಮ್ ಮತ್ತು ರಂಜಕ ಕರಗಿಸುವ ಬ್ಯಾಕ್ಟಿರಿಯಾ (ಫಾಸ್ಪೇಟ್ ಸಾಲ್ಯುಬಿಲೈಸಿಂಗ್ ಬಾಕ್ಷೀರಿಯಾ) ಗಳನ್ನು ತಲಾ 2 ಕೆಜಿಯಂತೆ ಬಿತ್ತೆನೆಯ ಸಮಯದಲ್ಲಿ ಸಾವಯವ ಗೊಬ್ಬರದೊಂದಿಗೆ ಅಥವಾ ಬೀಜೋಪಚಾರ ಮಾಡಿ ಅಥವಾ ಕೆಲವು ಆಧುನಿಕ ಜೈವಿಕ ಗೊಬ್ಬರಗಳನ್ನು ರಸಾಯನಿಕ ಗೊಬ್ಬರಗಳಿಗೆ ಲೇಪನ ಮಾಡಿ ಮಣ್ಣಿಗೆ ಸೇರಿಸಬೇಕು. ಇವು ವಾತವರಣದಲ್ಲಿರುವ ಸಾರಜನಕವನ್ನು ಬೆಳೆಗೆ ಸಿಗುವ ಹಾಗೆ ಮಾಡಲು ಮತ್ತು ಮಣ್ಣಿನಲ್ಲಿರುವ ರಂಜಕವನ್ನು ಬೆಳೆ ತೆಗೆದುಕೊಳ್ಳುವ ರೂಪಕ್ಕೆ ತಂದು ಕೊಡುವುದರಿಂದ ರಸಾಯನಿಕ ಗೊಬ್ಬರ ಬಳಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಪ್ರಕಾರ ಒಂದು ಎಕರೆ ಮೆಕ್ಕೆಜೋಳ ಬೆಳೆಗೆ ಯೂರಿಯಾ, ಡಿ.ಏ.ಪಿ ಮತ್ತು ಎಂ.ಓ.ಪಿ ಮೂಲಕ ಗೊಬ್ಬರವನ್ನು ಕೊಡುವುದಾದರೆ, ಯೂರಿಯಾ 100-110 ಕೆಜಿ, ಡಿ.ಏ.ಪಿ 65 ಕೆಜಿ ಮತ್ತು ಎಂ.ಓ.ಪಿ 25-30 ಕೆಜಿ ಕೊಡಬೇಕಾಗುತ್ತದೆ. ಬಿತ್ತನೆಯ ಸಮಯದಲ್ಲಿ ಸಂಪೂರ್ಣ ರಂಜಕ ಮತ್ತು ಪೊಟ್ಯಾಷ್ ಹಾಗು ಅರ್ಧದಷ್ಟು ಸಾರಜನಕ ಗೊಬ್ಬರಗಳನ್ನು ಕೊಡಬೇಕು. ಉಳಿದ ಸಾರಜನಕವನ್ನು ಮೇಲುಗೊಬ್ಬರವಾಗಿ 30-40 ದಿನದ ಬೆಳೆಯಿದ್ದಾಗ ಉಪಯೋಗಿಸುವುದು. ರೈತರು ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳಿಗೆ ಸಮಾನ ಮಹತ್ವವನ್ನು ಕೊಡಬೇಕಾಗುತ್ತದೆ. ಆದರೆ ಹೆಚ್ಚಾಗಿ ಸಾರಜನಕವನ್ನು ಉಪಯೋಗಿಸಿ ಉಳಿದ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅಸಮತೋಲಿತ ಪೋಷಕಾಂಶಗಳ ಬಳಕೆಗೆ ಎಡೆ ಮಾಡಿ ಕೊಟ್ಟಿದೆ. ಇದರಿಂದ ಬೆಳೆಗೆ ಕೆಲವೊಮ್ಮೆ ರೋಗ ಮತ್ತು ಕೀಟ ಬಾದೆ ಹೆಚ್ಚಾಗುವ ಸಂಭವಗಳಿರುತ್ತವೆ.
ಪೊಟ್ಯಾಷಿಯಂ ಒಂದು ಅತಿ ಮುಖ್ಯವಾದ ಪ್ರಧಾನ ಪೋಷಕಾಂಶ, ಆದರೆ ಹೆಚ್ಚು ಭಾಗ ರೈತರು ಈ ಪೋಷಕಾಂಶವನ್ನು ಕಡೆಗಣಿಸಿದ್ದಾರೆ. ಪೊಟ್ಯಾಷಿಯಂ ಬೇರು ಬೆಳವಣಿಗೆ ಹೆಚ್ಚಿಸಿ ಇತರೆ ಪೋಷಕಾಂಶಗಳ ಹೀರುವಿಕೆಯಲ್ಲಿ ಸಹಕರಿಸುತ್ತದೆ. ಕಾಂಡಕ್ಕೆ ಬಲ ಕೊಟ್ಟು, ಬರ, ರೋಗ ಮತ್ತು ಕೀಟಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೊಡುತ್ತದೆ.
ಪೊಟ್ಯಾಷಿಯಂ ಅನ್ನು ಗುಣಮಟ್ಟದ ಪೋಷಕಾಂಶ ಎಂದು ಕರೆಯುತ್ತಾರೆ. ಏಕೆಂದರೆ ಇದು,
– ತೆನೆ ತುಂಬಾ ಕಾಳು ಕಟ್ಟಲು ಅವಶ್ಯಕ
– ಕಾಳುಗಳ ಗಾತ್ರ ಮತ್ತು ಆಕಾರವನ್ನು ಸುಧಾರಿಸುತ್ತದೆ
– ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ
ಆದ್ದರಿಂದ ರೈತರು ಪೊಟ್ಯಾಷ್ ಗೊಬ್ಬರಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟು, ಸರಿ ಪ್ರಮಾಣದಲ್ಲಿ ಉಳಿದ ಪೋಷಕಾಂಶಗಳ ಜೊತೆ ಉಪಯೋಗಸಬೇಕು.
ಲಘು ಪೋಷಕಾಂಶಗಳನ್ನು ಮಣ್ಣು ಪರೀಕ್ಷೆ ಆಧಾರದಲ್ಲಿ ಮಣ್ಣಿಗೆ ಕೊಡಬೇಕು. ಲಘು ಪೋಷಕಾಂಶಗಳನ್ನು ಕೊಟ್ಟಿಲ್ಲವಾದಲ್ಲಿ ಅಥವಾ ಅವುಗಳ ಕೊರತೆ ಕಂಡುಬಂದಲ್ಲಿ ಬೆಳೆ ಸುಮಾರು 25 ರಿಂದ 40 ದಿನವಿರುವಾಗ ಮೊಜೆಕ್ ಮ್ಯಾಗ್ನ ಜಿಂಕ್ ಮತ್ತು ಮ್ಯಾಗ್ನ ಬೋರಾನ್ ದ್ರವ ರೂಪದ ಗೊಬ್ಬರಗಳನ್ನು ಒಂದು ಲೀಟರ್ ನೀರಿಗೆ ತಲಾ ಒಂದು ಮಿ.ಲೀ ನಂತೆ ಬೆರೆಸಿ ಸಿಂಪಡಣೆ ಮಾಡಿದಾಗ ಬೆಳೆ ತ್ವರಿತವಾಗಿ ಕೊರತೆಯಿಂದ ಹೊರಬಂದು ಬೆಳವಣಿಗೆ, ಇಳುವರಿ ಮತ್ತು ಗುಣಮಟ್ಟ ಹೆಚ್ಚಾಗಲು ಸಹಕರಿಸುತ್ತವೆ.
ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಪ್ರಯೋಜನಗಳು:
– ಇಳುವರಿ ಹೆಚ್ಚುತ್ತದೆ ಎಷ್ಟು ಮಟ್ಟಿಗೆ ನಾವು ಬೆಳೆಗೆ ಪೋಷಣೆ ನೀಡುತ್ತೇವೋ ಅಷ್ಟೇ ಪ್ರಮಾಣದಲ್ಲಿ ಇಳುವರಿ ಹೆಚ್ಚುತ್ತದೆ (ಶೇಕಡಾ 50 ರಷ್ಟು ಇಳುವರಿ ಗೊಬ್ಬರಗಳ ಮೇಲೆ ನಿರ್ಧಾರವಾಗುತ್ತದೆ).
– ಗುಣಮಟ್ಟ ಹೆಚ್ಚಾಗುತ್ತದೆ.
– ರೈತರಿಗೆ ಆದಾಯ ಹೆಚ್ಚಾಗುವುದು.
– ಖರ್ಚು ಕಡಿಮೆಯಾಗುವುದು- “ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಮಾತಿನಂತೆ ಸರಿಯಾದ ಪೋಷಣೆಯನ್ನು ಬೆಳೆಗೆ ನೀಡಿದಾಗ ಹುಳ ಮತ್ತು ರೋಗ ಬಾಧೆ ಕಡಿಮೆಯಾಗುವುದರಿಂದ ಖರ್ಚು ಕಡಿಮೆಯಾಗುತ್ತದೆ.
– ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ- ಸಾವಯವ ಇಂಗಾಲವನ್ನು ಹೆಚ್ಚಿಸಲು/ಸುಧಾರಿಸಲು ಸಹಕಾರಿ. ಮಣ್ಣಿನ ಭೌತಿಕ, ಜೈವಿಕ ಮತ್ತು ರಸಾಯನಿಕ ಗುಣಲಕ್ಷಣಗಳಲ್ಲಿ ಸುಧಾರಣೆಯಾಗುವುದು. ನೀರು/ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
– ಉತ್ಪಾದಕತೆಯನ್ನು ಹೆಚ್ಚಿಸಬಹುದು- ಎಲ್ಲಾ ಮೂಲಗಳನ್ನು ಉಪಯೋಗಿಸಿದಾಗ ಪೋಷಕಾಂಶಗಳ ದಕ್ಷ ಬಳಕೆಯಾಗಿ ಪೋಷಕಾಂಶಗಳು ಪೋಲಾಗುವುದನ್ನು ತಪ್ಪಿಸಬಹುದು.
– ಪರಿಸರ ಮಾಲಿನ್ಯವನ್ನು ತಡೆಯಬಹುದು- ರಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿದಾಗ ಮಣ್ಣು, ನೀರು ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬಹುದು.
ಬೆಳೆ ಪರಿವರ್ತನೆ: ಮೆಕ್ಕೆಜೋಳದ ನಂತರ ಮೆಕ್ಕೆಜೋಳ ಅಥವಾ ಇನ್ನಿತರ ಏಕದಳ ಧಾನ್ಯ ಬೆಳೆಗಳನ್ನು ಬೆಳೆಯಬಾರದು. ದ್ವಿದಳ ಧಾನ್ಯಗಳ ಅಥವಾ ತರಕಾರಿ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಿದಾಗ ಮಣ್ಣಿನ ಆರೋಗ್ಯವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.
ನಮ್ಮ ಮೇಲಿನ ಒಂದು ಅತಿ ಮುಖ್ಯವಾದ ಜವಾಬ್ದಾರಿ ಎಂದರೆ ಈಗಿರುವ ಮಣ್ಣಿನ ಸ್ಥಿತಿ/ ಆರೋಗ್ಯವನ್ನು ಸುಧಾರಿಸಿಕೊಂಡು ಅಥವಾ ಕಾಪಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಕೊಡುವುದಾಗಿದೆ. ಆಹಾರ ಭದ್ರತೆಯನ್ನು ಒದಗಿಸಲು ಮಣ್ಣಿನ ಆರೋಗ್ಯವನ್ನು ಸುಧಾರಣೆ ಮಾಡುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಅವಶ್ಯಕ. ಹಾಗಾಗಿ ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ 4R ಪೋಷಕಾಂಶ ನಿರ್ವಹಣೆ (4R Nutrient Stewardship) ಅಂದರೆ ಮಣ್ಣಿಗೆ ಮತ್ತು ಬೆಳೆಗೆ ಸರಿಯಾದ ಗೊಬ್ಬರಗಳ ಮೂಲಗಳನ್ನು ಆಯ್ಕೆ ಮಾಡಿಕೊಂಡು, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಜಾಗ ಅಂದರೆ ಬೇರುಗಳು ಹೆಚ್ಚಿರುವ ಜಾಗದಲ್ಲಿ ಗೊಬ್ಬರಗಳನ್ನು ಕೊಟ್ಟು ಬೆಳೆ ಮಾಡಿದಾಗ ರೈತರು ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಪಡೆಯುವುದರ ಜೊತೆಗೆ ಪರಿಸರವನ್ನು ಸಂರಕ್ಷಿಸಬಹುದು.